ಬಾಲಸುಬ್ರಹ್ಮಣ್ಯಂ, ಎಸ್ ಪಿ
(1948- ). ಅತ್ಯಧಿಕ ಸಂಖ್ಯೆಯಲ್ಲಿ ಕನ್ನಡ ಚಿತ್ರಗೀತೆಗಳನ್ನು ಹಾಡಿರುವ ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಹ್ಮಣ್ಯಂ ಆಂಧ್ರಪ್ರದೇಶದ ಕೋನೇಟಂಪೇಟ ಎಂಬಲ್ಲಿ 1946ರ ಜೂನ್ 4ರಂದು ಜನಿಸಿದರು. ತಂದೆ ಪಂಡಿತ ಸಾಂಬಶಿವನ್ ಹರಿಕಥಾ ವಿದ್ವಾಂಸರು. ಮದರಾಸಿನಲ್ಲಿ ವಿದ್ಯಾಭ್ಯಾಸ ಮಾಡಿ ಎಂಜನಿಯರಿಂಗ್ ಪದವಿಗಳಿಸಿದರು. ವಿದ್ಯಾರ್ಥಿಯಾಗಿದ್ದಾಗಲೇ ತಾವೇ ಗೀತೆಯೊಂದನ್ನು ರಚಿಸಿ ಹಾಡಿ ತೀರ್ಪುಗಾರರಾಗಿದ್ದ ಖ್ಯಾತ ಹಿನ್ನೆಲೆ ಗಾಯಕ ಘಂಟಸಾಲ ಅವರಿಂದ ಮೆಚ್ಚುಗೆ ಪಡೆದರು. 
ಶ್ರೀಶ್ರೀಮರ್ಯಾದರಾಮಣ್ಣ (1966) ತೆಲುಗು ಚಿತ್ರಕ್ಕಾಗಿ ಹಾಡುವ ಮೂಲಕ ಚಿತ್ರರಂಗಕ್ಕೆ ಪರಿಚಯಗೊಂಡÀ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರದು ಹಿನ್ನೆಲೆಗಾಯನ ಕ್ಷೇತ್ರದಲ್ಲಿ ಅತಿ ದೊಡ್ಡ ಹೆಸರು. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಮುಂತಾದ ದಕ್ಷಿಣ ಭಾಷೆಗಳ ಚಿತ್ರಗಳಲ್ಲಿ ಮಾತ್ರವಲ್ಲದೆ ಉತ್ತರಭಾರತದ ಹಲವಾರು ಭಾಷೆಯ ಚಿತ್ರಗಳಲ್ಲಿಯೂ ಹಾಡಿದ್ದಾರೆ. 

  	ಎಂ.ಆರ್.ವಿಠಲ್ ನಿರ್ದೇಶಿದ “ನಕ್ಕರೆ ಅದೇ ಸ್ವರ್ಗ” (1967) ಚಿತ್ರದಲ್ಲಿ ಅಳವಡಿಸಿರುವ ಕನಸಿದೋ ನನಸಿದೋ ಗೀತೆಯನ್ನು ನಟ ಅರುಣಕುಮಾರ್ ಅವರಿಗಾಗಿ ಹಾಡುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಎಸ್ಪಿ ನಾಲ್ಕು ಸಾವಿರಕ್ಕೂ ಹೆಚ್ಚು ಕನ್ನಡ ಹಾಡುಗಳನ್ನು ಹಾಡಿರುವ ಏಕೈಕ ಚಲನಚಿತ್ರ ಹಿನ್ನೆಲೆ ಗಾಯಕರು. ಭಾರತದ ವಿವಿಧ ಭಾಷೆಗಳಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಇವರು ಸುಮಾರು ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತವನ್ನೂ ಸಂಯೋಜಿಸಿದ್ದಾರೆ. ಕನ್ನಡದಲ್ಲಿ ಸಂದರ್ಭ, ರಾಮಣ್ಣಶಾಮಣ್ಣ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಅಭಿನಯ ಇವರ ಮತ್ತೊಂದು ಪ್ರವೃತ್ತಿ. ತಮಿಳಿನ ಕೇಳಡಿ ಕಣ್ಮಣಿ ಚಿತ್ರದಿಂದ ಆರಂಭಿಸಿ ಅನೇಕ ಚಲನಚಿತ್ರಗಳಲ್ಲಿ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಬಾಳೊಂದುಚದುರಂಗ, ಕಲ್ಯಾಣೋತ್ಸವ, ಮುದ್ದಿನಮಾವ, ಮಾಂಗಲ್ಯಂತಂತುನಾನೇನ, ಭಾರತ 2000 ಇವರು ಅಭಿನಯಿಸಿದ  ಕನ್ನಡ  ಚಿತ್ರಗಳು. 

  	ವಿವಿಧ ನಾಯಕ ನಟರಿಗಾಗಿ ವಿಭಿನ್ನ ಶಾರೀರದಲ್ಲಿ ಹಾಡುವುದು ಇವರ ವಿಶೇಷ. ಮೂರು ಪೀಳಿಗೆಯ ನಾಯಕ ನಟರಿಗಾಗಿ ಹಾಡಿರುವುದು ಇವರ ಹೆಗ್ಗಳಿಕೆ. ಬೆಂಗಳೂರಿನಲ್ಲಿ ಒಂದೇ ದಿನ 16 ಹಾಗೂ ಮದರಾಸಿನಲ್ಲಿ ಒಂದೇ ದಿನ 19 ಹಾಡುಗಳನ್ನು ಹಾಡುವ ಮೂಲಕ ದಾಖಲೆ ಸ್ಥಾಪಿಸಿದ್ದಾರೆ. ಮಾಮರವೆಲ್ಲೋ ಕೋಗಿಲೆಯೆಲ್ಲೋ (ದೇವರಗುಡಿ), ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು (ಹೊಂಬಿಸಿಲು), ನೂರೆಂಟು ನೆನಪು ಎದೆಯಾಳದಿಂದ (ಬಂಧನ) ಮುಂತಾದ ಮಧುರ ಗೀತೆಗಳನ್ನು ಎಸ್ಪಿ ಹಾಡಿದ್ದಾರೆ.

   	1997-98ನೇ ಸಾಲಿನಲ್ಲಿ ``ಓ ಮಲ್ಲಿಗೆ ಚಿತ್ರಕ್ಕಾಗಿ ``ಮುದ್ದಾದ ಬಲೆ ಹೆಣೆದೆ ಗೀತೆ ಹಾಡಿ ರಾಜ್ಯಸರ್ಕಾರದಿಂದ ಅತ್ಯುತ್ತಮ ಹಿನ್ನೆಲೆಗಾಯಕ ಪ್ರಶಸ್ತಿಯನ್ನು ಪಡೆದಿರುವ ಬಾಲಸುಬ್ರಹ್ಮಣ್ಯಂ ಅವರು ``ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದಲ್ಲಿನ ಗಾಯನಕ್ಕಾಗಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ “ಹಿನ್ನೆಲೆ ಗಾಯಕ” (1995) ಪ್ರಶಸ್ತಿಯನ್ನು ಪಡೆದಿದ್ದಾರೆ. ಎದೆತುಂಬಿಹಾಡುವೆನು ಕಿರುತೆರೆ ಧಾರಾವಾಹಿ ಮೂಲಕ ನೂರಾರು ಯುವ ಗಾಯಕ ಗಾಯಕಿಯರನ್ನು ಬೆಳಕಿಗೆ ತಂದಿದ್ದಾರೆ. ನಾನಿನ್ನು ಕಲಿಯುತ್ತಿರುವ ವಿದ್ಯಾರ್ಥಿ ಎಂದು ಹೇಳಿಕೊಳ್ಳುವ ಸೌಜನ್ಯ, ವಿನಮ್ರತೆ. ತಮ್ಮನ್ನು ಹಾಡಲು ಬಲವಂತ ಪಡಿಸುವ ನಿರ್ಮಾಪಕರಿಗೆ ಹಾಗೂ ಸಂಗೀತ ನಿರ್ದೇಶಕರಿಗೆ ನಿಮ್ಮಲ್ಲಿ ನನಗಿಂತ ಉತ್ತಮವಾಗಿ ಹಾಡಬಲ್ಲ ಗಾಯಕರಿದ್ದಾರೆ. ಎಂದು ಹೆಸರುಗಳನ್ನು ಸೂಚಿಸಿ, ಅವರಿಂದ ಹಾಡಿಸಿ ಎಂದು ಒತ್ತಾಯಿಸುವ ಹೃದಯ ವೈಶಾಲ್ಯ ಇವರದು. 		(ನೋಡಿ- ಹಂಸಲೇಖ)	 (ಎ.ಎನ್.ಪ್ರಹ್ಲಾದ್‍ರಾವ್; ಶ್ರೀಕೃಪಾ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ